ಮಲ್ಟಿಬ್ಯಾಗರ್ ಆದ ಜೆಎಸ್​ಡಬ್ಲ್ಯೂ ಎನರ್ಜಿ ಷೇರು; 3 ವರ್ಷದಲ್ಲಿ ಸೂಪರ್ ಜಿಗಿತ; 1 ಲಕ್ಷಕ್ಕೆ 8 ಲಕ್ಷ ಲಾಭ; ಇನ್ನೂ ಏರುತ್ತಂತೆ ಬೆಲೆ

JSW Energy share price

JSW Energy Share Price: ಜೆಎಸ್​ಡಬ್ಲ್ಯು ಎನರ್ಜಿ ಸಂಸ್ಥೆಯ ಷೇರು 2020ರ ಮೇ ತಿಂಗಳಲ್ಲಿ 39 ರೂ ಇದ್ದದ್ದು ಇದೀಗ 307 ರೂ ಬೆಲೆಯ ಮಟ್ಟಕ್ಕೆ ಬೆಳೆದಿದೆ. 3 ವರ್ಷಗಳಿಂದ ಇದು ಪಕ್ಕಾ ಮಲ್ಟಿಬ್ಯಾಗರ್ ಎನಿಸಿದೆ.

ನವದೆಹಲಿ:ವಿದ್ಯುತ್ ಉತ್ಪಾದನಾ ಕ್ಷೇತ್ರದ ಜೆಎಸ್​ಡಬ್ಲ್ಯೂ ಎನರ್ಜಿ ಸಂಸ್ಥೆ (JSW Energy) ಕಳೆದ 3 ವರ್ಷಗಳಿಂದ ಅಪ್ಪಟ ಮಲ್ಟಿಬ್ಯಾಗರ್(Multibagger) ಆಗಿ ಪರಿಣಮಿಸಿದೆ . ಫೆಬ್ರುವರಿ ಕೊನೆಯ ವಾರದಲ್ಲಿ 211 ರೂ ಇದ್ದ ಅದರ ಷೇರುಬೆಲೆ ನಾಲ್ಕೈದು ತಿಂಗಳಲ್ಲಿ ಶೇ . 50 ರಷ್ಟು ಬೆಳೆದಿದೆ . ಜುಲೈ 5 ರಂದು ಅದರ ಬೆಲೆ 300 ರೂ ದಾಟಿತ್ತು . ಇವತ್ತು ( ಜುಲೈ 6) ಜೆಎಸ್​ಡಬ್ಲ್ಯೂ ಎನರ್ಜಿ ಸಂಸ್ಥೆಯ ಷೇರುಬೆಲೆ 307 ರೂಗೆ ಹೋಗಿದೆ . ಕಳೆದ 7 ತಿಂಗಳಲ್ಲಿ ಮೊದಲ ಬಾರಿಗೆ ಅದರ ಬೆಲೆ 300 ರೂ ಗಡಿ ದಾಟಿದೆ .

ಕಳೆದ 3 ವರ್ಷಗಳಿಂದ ಜೆಎಸ್​ಡಬ್ಲ್ಯು ಎನರ್ಜಿ ಸಂಸ್ಥೆ ಅಪೂರ್ವಾಗಿ ಬೆಳೆದಿದೆ. 2020ರ ಮೇ ತಿಂಗಳಲ್ಲಿ ಅದರ ಬೆಲೆ 39 ರೂನಷ್ಟು ಇತ್ತು. ಅಲ್ಲಿಂದೀಚೆ ಮೂರು ಹಂತಗಳಲ್ಲಿ ಷೇರುಬೆಲೆ ಹೈಜಂಪ್ ಮಾಡಿದೆ.

ಜೆಎಸ್​ಡಬ್ಲ್ಯೂ ಷೇರುಬೆಲೆ ಇತಿಹಾಸ…

ಜೆಎಸ್​ಡಬ್ಲ್ಯೂ ಎನರ್ಜಿ ಲಿ ಸಂಸ್ಥೆಯ ಷೇರುಬೆಲೆ 2010 ಜನವರಿ 8ರಂದು 113.10 ರೂ ಇತ್ತು. ಆಗ ಇದರ ಷೇರಿನ ಮೇಲೆ ಯಾರಾದರೂ 1 ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ಅವರ ಷೇರುಸಂಪತ್ತು 2,71,441 ರೂ ಆಗುತ್ತಿತ್ತು.

2020ರ ಮೇ ತಿಂಗಳಲ್ಲಿ ಇದರ ಷೇರುಬೆಲೆ 39 ರೂ ಇದ್ದಾಗ 1 ಲಕ್ಷ ರೂ ಹೂಡಿಕೆ ಮಾಡಿದವರಿದ್ದರೆ ಅವರ ಷೇರುಸಂಪತ್ತು ಇವತ್ತು 7.87 ಲಕ್ಷ ರೂ ಆಗುತ್ತಿತ್ತು. ಅಂದರೆ 3 ವರ್ಷದಲ್ಲಿ ಷೇರುಸಂಪತ್ತು ಹೆಚ್ಚುಕಡಿಮೆ 8 ಪಟ್ಟು ವೃದ್ದಿಸುತ್ತಿತ್ತು.

2020 ಮೇ ತಿಂಗಳಿಂದ 2021 ಅಕ್ಟೋಬರ್​ವರೆಗೆ ಜೆಎಸ್​ಡಬ್ಲ್ಯೂ ಎನರ್ಜಿ ಷೇರುಬೆಲೆ ಭರ್ಜರಿ ಜಿಗಿತ ಕಂಡಿತ್ತು. 39 ರೂ ಇದ್ದ ಅದರ ಬೆಲೆ 2022ರ ಅಕ್ಟೋಬರ್ 14ಕ್ಕೆ 394 ರೂಪಾಯಿಗೆ ಜಿಗಿದಿತ್ತು. 16 ತಿಂಗಳಲ್ಲಿ ಅದರ ಬೆಲೆ 10 ಪಟ್ಟು ಹೆಚ್ಚಾಗಿತ್ತು.

ಜೆಎಸ್​ಡಬ್ಲ್ಯೂ ಎನರ್ಜಿ ಸಂಸ್ಥೆಯ ಷೇರನ್ನು ತಾಂತ್ರಿಕವಾಗಿ ನೋಡುವುದಾದರೆ, ಅದರ ಆರ್​ಎಸ್​ಐ (ರಿಲೇಟಿವ್ ಸ್ಟ್ರೆಂತ್ ಇಂಡೆಕ್ಸ್) 66.9ರಲ್ಲಿ ಇದೆ. ಅಂದರೆ ಸರಿ ಮಟ್ಟದಲ್ಲಿ ಅದರ ವಹಿವಾಟು ನಡೆಯುತ್ತಿರುವುದರ ಸಂಕೇತ ಅದು. ಷೇರುಮಾರುಕಟ್ಟೆ ತಜ್ಞರು ಮತ್ತು ಏಜೆನ್ಸಿಗಳ ಪ್ರಕಾರ ಇದರ ಬೆಲೆ 330 ರೂವರೆಗೂ ಹೋಗಬಹುದು.

Leave a Reply

Your email address will not be published. Required fields are marked *